(C) ಭಾರತದ ರಾಷ್ಟ್ರಧ್ವಜದ ಬಗೆಗೆ ಮತ್ತೆ ಮತ್ತೆ ಕೇಳಲಾಗುವ ಪ್ರಶ್ನೆಗಳು
ಪ್ರ.1 ರಾಷ್ಟ್ರಧ್ವಜದ ಬಳಕೆ, ಪ್ರದರ್ಶನ ಹಾಗೂ ಹಾರಿಸುವಿಕೆಯ ಬಗೆಗೆ ಯಾವುದಾದರೂ ಸೂಚನೆಗಳನ್ನು ಪಾಲಿಸಲೇಬೇಕಾದ ಮಾರ್ಗಸೂಚಿಯಿದೆಯೇ?
ಹೌದು ಇವೆ-ʻಫ್ಲಾಗ್ ಕೋಡ್ ಆಫ್ ಇಂಡಿಯ 2022ʼ ಮತ್ತು ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಆನರ್ ಆಕ್ಟ್, 1971.
ಪ್ರ.2 ಫ್ಲಾಗ್ ಕೋಡ್ ಆಫ್ ಇಂಡಿಯ 2022 ಎಂದರೇನು?
ರಾಷ್ಟ್ರಧ್ವಜವನ್ನು ಪ್ರದರ್ಶಿಸುವುದಕ್ಕಾಗಿನ ಎಲ್ಲಾ ಕಾನೂನುಗಳು, ಆಚರಣೆಗಳು ಮತ್ತು ಸೂಚನೆಗಳನ್ನು ಫ್ಲಾಗ್ ಕೋಡ್ ಆಫ್ ಇಂಡಿಯಾ ಒಗ್ಗೂಡಿಸುತ್ತದೆ. ಖಾಸಗಿ, ಸರಕಾರಿ ಹಾಗೂ ಸಾರ್ವಜನಿಕ ಸಂಸ್ಥೆಗಳ ರಾಷ್ಟ್ರಧ್ವಜದ ಪ್ರದರ್ಶನವನ್ನು ನಿಯಂತ್ರಿಸುತ್ತದೆ. ಫ್ಲಾಗ್ ಕೋಡ್ ಆಫ್ ಇಂಡಿಯಾ 26ನೇ ಜನವರಿ 2002ರಂದು ಜಾರಿಗೆ ಬಂದಿತು.
ಪ್ರ.3 ರಾಷ್ಟ್ರಧ್ವಜವನ್ನು ತಯಾರಿಸಲು ಯಾವ ವಸ್ತುವನ್ನು ಬಳಸಬಹುದು?
ಫ್ಲಾಗ್ ಕೋಡ್ ಆಫ್ ಇಂಡಿಯಾ 2002ನ್ನು ದಿ. 30ನೇ ಡಿಸೆಂಬರ್ 2021ರ ಆದೇಶದ ಮೇರೆಗೆ ತಿದ್ದುಪಡಿ ಮಾಡಲಾಗಿದೆ. ಅದರ ಪ್ರಕಾರವಾಗಿ ಪಾಲಿಯೆಸ್ಟರ್ ಅಥವಾ ಯಂತ್ರದಿಂದ ತಯಾರಾದ ಧ್ವಜವನ್ನು ಅನುಮತಿಸಲಾಗಿದೆ. ಈಗ ರಾಷ್ಟ್ರಧ್ವಜವನ್ನು ಕೈನಲ್ಲಿ ನೇಯಲಾದ ಅಥವಾ ಯಂತ್ರದಲ್ಲಿ ತಯಾರಾದ ಹತ್ತಿ/ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ ಅಥವಾ ಖಾದಿಯಿಂದ ತಯಾರಿಸಬಹುದು.
ಪ್ರ.4 ರಾಷ್ಟ್ರಧ್ವಜದ ಸರಿಯಾದ ಉದ್ದಗಲ ಹಾಗೂ ಅನುಪಾತ ಯಾವುದು?
ಫ್ಲಾಗ್ ಕೋಡ್ ಆಫ್ ಇಂಡಿಯಾದ ಪ್ಯಾರಾ 1.3 ಮತ್ತು 1.4ರ ಪ್ರಕಾರವಾಗಿ ರಾಷ್ಟ್ರೀಯ ಧ್ವಜವು ಆಯತಾಕಾರದಲ್ಲಿರಬೇಕು. ಧ್ವಜವು ಯಾವುದೇ ಗಾತ್ರದಲ್ಲಿದ್ದರೂ ಉದ್ದ ಹಾಗೂ ಅಗಲದ ಅನುಪಾತವು 3:2ರಷ್ಟಿರಬೇಕು.
ಪ್ರ.5 ನನ್ನ ಮನೆಯಲ್ಲಿ ರಾಷ್ಟ್ರೀಯ ಧ್ವಜವನ್ನು ಪ್ರದರ್ಶಿಸಬಹುದೇ?
ಫ್ಲಾಗ್ ಕೋಡ್ ಆಫ್ ಇಂಡಿಯಾದ ಪ್ಯಾರಾ 2.2ರ ಪ್ರಕಾರವಾಗಿ ರಾಷ್ಟ್ರಧ್ವಜದ ಘನತೆ ಹಾಗೂ ಗೌರವಕ್ಕನುಗುಣವಾಗಿ ಸಮಾಜದ ಯಾವುದೇ ವ್ಯಕ್ತಿ ಅಥವಾ ಖಾಸಗಿ ಸಂಸ್ಥೆ ಅಥವಾ ವಿದ್ಯಾ ಸಂಸ್ಥೆ ಎಲ್ಲಾ ದಿನಗಳಂದು ಅಥವಾ ಸಂದರ್ಭಗಳಲ್ಲಿಯೂ ರಾಷ್ಟ್ರಧ್ವಜವನ್ನು ಹಾರಿಸಬಹುದು/ ಪ್ರದರ್ಶಿಸಬಹುದು.
ಪ್ರ.6 ಮನೆಯಲ್ಲಿ/ಹೊರಾಂಗಣದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಯಾವ ಸಮಯ ಸರಿಯಾದದ್ದು?
ದಿನಾಂಕ 20ನೇ ಜುಲೈ 2022ರ ತಿದ್ದುಪಡಿ ಆದೇಶದ ಪ್ರಕಾರ ಫ್ಲಾಗ್ ಕೋಡ್ ಆಫ್ ಇಂಡಿಯಾ, 2002ರಲ್ಲಿನ ಭಾಗ-2ರ ಪ್ಯಾರಾ 2.2ರ ನಿಯಮ xiನ್ನು ಕೆಳಕಾಣಿಸಿದ ನಿಯಮದಿಂದ ಬದಲಾಯಿಸಲಾಗಿದೆ: ಸಾರ್ವಜನಿಕರ ಮನೆಯ ಮೇಲೆ ಅಥವಾ ಹೊರಾಂಗಣದಲ್ಲಿ ಧ್ವಜವನ್ನು ಪ್ರದರ್ಶಿಸಲ್ಪಟ್ಟಾಗ ಅದನ್ನು ಹಗಲು ಮತ್ತು ರಾತ್ರಿಯಲ್ಲಿಯೂ ಹಾರಿಸಬಹುದು.
ಪ್ರ.7 ನನ್ನ ಮನೆಯಲ್ಲಿ ರಾಷ್ಟ್ರಧ್ವಜವನ್ನು ಪ್ರದರ್ಶಿಸುವಾಗ ನಾನು ಯಾವುದಕ್ಕೆ ಗಮನ ಕೊಡಬೇಕು?
ರಾಷ್ಟ್ರಧ್ವಜವು ಪ್ರದರ್ಶಿಸಲ್ಪಟ್ಟಿದ್ದಾಗ ಅದನ್ನು ಒಂದು ಎತ್ತರದ ಸ್ಥಳದಲ್ಲಿ ವಿಶಿಷ್ಟವಾಗಿ, ಗೌರವಯುತವಾಗಿ ಇಡಬೇಕು. ಹರಿದ, ಮಡಿಕೆಯಾದ ಧ್ವಜವನ್ನು ಪ್ರದರ್ಶಿಸಬಾರದು.
ಪ್ರ.8 ರಾಷ್ಟ್ರಧ್ವಜದ ತಪ್ಪಾದ ಪ್ರದರ್ಶನ ಮಾಡದ ಹಾಗೆ ಯಾವ ವಿಷಯವನ್ನು ನಾನು ಗಮನದಲ್ಲಿಡಬೇಕು?
- ರಾಷ್ಟ್ರಧ್ವಜವನ್ನು ತಿರುವಿದ ಸ್ಥಿತಿಯಲ್ಲಿ ಪ್ರದರ್ಶಿಸಬಾರದು. ಅಂದರೆ ಕೇಸರಿವರ್ಣವು ಕೆಳಗಿರಬಾರದು.
- ಯಾವುದೇ ವ್ಯಕ್ತಿಗೆ ಅಥವಾ ವಿಷಯಕ್ಕೆ ರಾಷ್ಟ್ರಧ್ವಜವನ್ನು ಬಗ್ಗಿಸಬಾರದು.
- ಬೇರೆ ಯಾವುದೇ ಧ್ವಜ ಅಥವಾ ಬಂಟಿಂಗ್ನ್ನು ರಾಷ್ಟ್ರಧ್ವಜಕ್ಕಿಂತಲೂ ಮೇಲೆ ಅಥವಾ ಅಕ್ಕಪಕ್ಕದಲ್ಲಿಡಬಾರದು.
- ರಾಷ್ಟ್ರಧ್ವಜವನ್ನು ಹಾರಿಸಿದ ಕಂಭದ ಮೇಲೆ ಅಥವಾ ಅದಕ್ಕಿಂತ ಎತ್ತರದಲ್ಲಿ ಯಾವುದೇ ಹೂ ಅಥವಾ ಹಾರ ಅಥವಾ ಗುರುತಿನ ಮುದ್ರೆಯನ್ನು ಇಡಬಾರದು.
- ರಾಷ್ಟ್ರಧ್ವಜವನ್ನು ಅಲಂಕಾರಕ್ಕಾಗಿ ಬಂಟಿಂಗ್ ರೀತಿಗಳಲ್ಲಿ ಬಳಸಬಾರದು.
- ರಾಷ್ಟ್ರಧ್ವಜವು ನೆಲವನ್ನು ಮುಟ್ಟುವ ಹಾಗೆ ಮತ್ತು ನೀರಿನಲ್ಲಿ ತಗಲುವ ಹಾಗೆ ಬಿಡಬಾರದು.
- ರಾಷ್ಟ್ರಧ್ವಜಕ್ಕೆ ಹಾನಿಯುಂಟು ಮಾಡುವ ರೀತಿಯಲ್ಲಿ ಅಂಟಿಸಬಾರದು ಅಥವಾ ಹಾರಿಸಬಾರದು.
- ಒಂದೇ ಧ್ವಜಕಂಭದ ಮೇಲೆ ಏಕಕಾಲಕ್ಕೆ ಬೇರೆ ಯಾವುದೇ ಧ್ವಜದ ಜೊತೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಾರದು.
- ಭಾಷಣಕಾರನ ಮೇಜು ಅಥವಾ ವೇದಿಕೆಗಾಗಿ ರಾಷ್ಟ್ರಧ್ವಜವನ್ನು ಬಳಸಬಾರದು.
- ಯಾವುದೇ ವ್ಯಕ್ತಿಯ ಸೊಂಟದ ಕೆಳಗಿನ ವಸ್ತ್ರದ ಭಾಗವಾಗಿ ಅಥವಾ ಸಮವಸ್ತ್ರ ಅಥವಾ ವೇಷಭೂಷಣದ ಭಾಗವಾಗಿ ರಾಷ್ಟ್ರ ಧ್ವಜವನ್ನು ಬಳಸಬಾರದು. ಅದನ್ನು ಮೆತ್ತೆಗಳ ಮೇಲೆ, ಕರವಸ್ತ್ರಗಳ ಮೇಲೆ, ಕಿರು ಟವೆಲ್ಗಳ ಮೇಲೆ ಅಥವಾ ಒಳಉಡುಪುಗಳು ಹಾಗೂ ವಸ್ತ್ರಗಳ ಮೇಲೆ ಕಸೂತಿ ಮಾಡಬಾರದು ಅಥವಾ ಮುದ್ರಿಸಬಾರದು.
ಪ್ರ.9 ಭಾರತದ ರಾಷ್ಟ್ರಧ್ವಜಕ್ಕೆ ಅಪಮಾನವಾಗುವುದನ್ನು ತಡೆಯಲು ಯಾವ ನಿಯಮಗಳಿವೆ?
ಹೌದು. ʻʻದಿ ಪ್ರಿವೆನ್ಷ್ನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಆನರ್ ಆಕ್ಟ್, 1971ʼʼರ ಭಾಗ-2ರ 4ನೇ ವಿವರಣೆಯ ಪ್ರಕಾರವಾಗಿ ಕೆಳಕಾಣಿಸಿದ ವಿಷಯಗಳನ್ನು ಗಮನಿಸಬೇಕು:
- ಯಾವುದೇ ರೂಪದಲ್ಲಿ, ಖಾಸಗಿ ಅಂತ್ಯಕ್ರಿಯೆ ಸೇರಿದಂತೆ, ರಾಷ್ಟ್ರಧ್ವಜವನ್ನು ಮೇಲೊದಿಕೆಯಾಗಿ ಬಳಸಬಾರದು.
- ರಾಷ್ಟ್ರಧ್ವಜವನ್ನು ವೇಷಭೂಷಣದ ಅಥವಾ ಸಮವಸ್ತ್ರದ ಅಥವಾ ಯಾವುದೇ ಸಮವಸ್ತ್ರದ ಭಾಗವಾಗಿ ಅಥವಾ ಯಾವುದೇ ವ್ಯಕ್ತಿಯ ಸೊಂಟದ ಕೆಳಗಿನ ವಸ್ತ್ರದ ಭಾಗವಾಗಿ, ಮೆತ್ತೆಗಳ ಮೇಲೆ, ಕರವಸ್ತ್ರಗಳ ಮೇಲೆ, ಕಿರು ಟವೆಲ್ಗಳ ಮೇಲೆ ಅಥವಾ ಒಳಉಡುಪುಗಳ ಮೇಲೆ ಅಥವಾ ವಸ್ತ್ರಗಳ ಮೇಲೆ ಕಸೂತಿ ಮಾಡಬಾರದು ಹಾಗೂ ಮುದ್ರಿಸಬಾರದು.
- ರಾಷ್ಟ್ರಧ್ವಜದ ಮೇಲೆ ಯಾವುದೇ ಅಕ್ಷರವಿರಬಾರದು.
- ರಾಷ್ಟ್ರಧ್ವಜವನ್ನು ವಸ್ತುಗಳ ವಿಲೇವಾರಿ, ಸ್ವೀಕೃತಿ ಅಥವಾ ಹೊದಿಕೆಗಾಗಿ ಬಳಸಬಾರದು.
- ರಾಷ್ಟ್ರಧ್ವಜವನ್ನು ಯಾವುದೇ ವಾಹನದ ಮೇಲೆ, ಹಿಂದೆ ಅಥವಾ ಪಕ್ಕದ ಭಾಗವಾಗಿ ಬಳಸಬಾರದು.
ಪ್ರ.10 ಹೊರಾಂಗಣದಲ್ಲಿ ಅಥವಾ ಸಾರ್ವಜನಿಕ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಪ್ರದರ್ಶಿಸುವ ಸರಿಯಾದ ರೀತಿ ಯಾವುದು?
- ರಾಷ್ಟ್ರಧ್ವಜವನ್ನು ಸಮಾನಾಂತರವಾಗಿ ಪ್ರದರ್ಶಿಸಿದಾಗ ಮತ್ತು ಗೋಡೆಯ ಮೇಲೆ ಸಮಾನಾಂತರವಾಗಿ ಇಟ್ಟಾಗ ಕೇಸರಿ ಭಾಗವು ಮೇಲ್ಭಾಗದಲ್ಲಿರಬೇಕು. ಧ್ವಜವನ್ನು ಮೇಲಿನಿಂದ ಇಳಿಬಿಟ್ಟಾಗ ರಾಷ್ಟ್ರಧ್ವಜದ ಕೇಸರಿ ಭಾಗವು ಬಲಕ್ಕಿರಬೇಕು ಅಂದರೆ ಅದರ ಎದುರಿಗಿರುವ ವ್ಯಕ್ತಿಯ ಎಡಭಾಗಕ್ಕಿರಬೇಕು.
- ರಾಷ್ಟ್ರಧ್ವಜವನ್ನು ಕಟ್ಟೆಯ ಮೇಲ್ಭಾಗದಿಂದ ಕೋಲಿನ ಮೂಲಕ ಸಮಾನಾಂತರವಾಗಿ ಅಥವಾ ಓರೆಯಾಗಿ ಪ್ರದರ್ಶಿಸಿದಲ್ಲಿ ಅಥವಾ ಬಾಲ್ಕನಿಯಿಂದ ಅಥವಾ ಕಟ್ಟಡದ ಮುಂಭಾಗದಿಂದ ಪ್ರದರ್ಶಿಸಿದಲ್ಲಿ ಕೇಸರಿ ಪಟ್ಟಿಯು ಕೋಲಿನ ತುದಿಗಿರಬೇಕು.
ಪ್ರ.11 ರಾಷ್ಟ್ರಧ್ವಜವನ್ನು ಅರ್ಧ ಎತ್ತರಕ್ಕೆ ಹಾರಿಸಬಹುದೇ?
ಭಾರತ ಸರಕಾರವು ಉದ್ಘೋಷಿಸಿದ ಸಂದರ್ಭದ ಹೊರತಾಗಿ ರಾಷ್ಟ್ರಧ್ವಜವನ್ನು ಅರ್ಧ ಎತ್ತರದ ಮಟ್ಟಕ್ಕೆ ಹಾರಿಸಬಾರದು. ಅರ್ಧ ಮಟ್ಟಕ್ಕೆ ಹಾರಿಸಬೇಕಾದಲ್ಲಿ ಧ್ವಜವನ್ನು ಮೊದಲು ತುತ್ತ ತುದಿಗೆ ಹಾರಿಸಿ ನಂತರ ಅರ್ಧಮಟ್ಟಕ್ಕೆ ಇಳಿಸಬೇಕು. ದಿನದ ಅಂತ್ಯದಲ್ಲಿ ಧ್ವಜವನ್ನು ಕೆಳಗಿಳಿಸಬೇಕಾದಲ್ಲಿ ಅದನ್ನು ಮತ್ತೆ ತುತ್ತತುದಿಗೆ ಏರಿಸಬೇಕು.
ಪ್ರ.12 ನನ್ನ ಕಾರಿನ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಬಹುದೇ?
ಫ್ಲಾಗ್ ಕೋಡ್ ಆಫ್ ಇಂಡಿಯಾ 2002ರ ಪ್ಯಾರಾ 3.44ರ ಪ್ರಕಾರವಾಗಿ ರಾಷ್ಟ್ರಧ್ವಜವನ್ನು ಕಾರಿನ ಮೇಲೆ ಹಾರಿಸುವ ಸವಲತ್ತನ್ನು ಕೆಳಕಾಣಿಸಿದ ವ್ಯಕ್ತಿಗಳಿಗೆ ಮಾತ್ರ ಸೀಮಿತ ಗೊಳಿಸಲಾಗಿದೆ.
- ರಾಷ್ಟ್ರಪತಿ
- ಉಪರಾಷ್ಟ್ರಪತಿ
- ರಾಜ್ಯಪಾಲರು ಮತ್ತು ಉಪರಾಜ್ಯಪಾಲರು
- ಭಾರತ ರಾಯಭಾರ ಕಚೇರಿಯ ಮುಖ್ಯಸ್ಥರು
- ಪ್ರಧಾನ ಮಂತ್ರಿಗಳು
- ಕೇಂದ್ರದ ಸಂಪುಟದ ಮಂತ್ರಿಗಳು, ರಾಜ್ಯ ಸಚಿವರು ಮತ್ತು ಉಪಸಚಿವರು. ರಾಜ್ಯದ ಅಥವಾ ಕೇಂದ್ರಾಡಳಿತ
- ಪ್ರದೇಶಗಳ ಮುಖ್ಯಮಂತ್ರಿಗಳು ಹಾಗೂ ಸಂಪುಟದ ಸಚಿವರು
- ಲೋಕಸಭೆಯ ಸ್ಪೀಕರ್, ರಾಜ್ಯಸಭೆಯ ಉಪ ಸಭಾಪತಿ, ಲೋಕಸಭೆಯ ಉಪಸಭಾಪತಿ, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಗಳ ಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನ ಪರಿಷತ್ತುಗಳ ಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಧಾನ ಪರಿಷತ್ ಉಪಸಭಾಪತಿಗಳು, ರಾಜ್ಯಗಳ ಹಾಗೂ ಕೇಂದ್ರಾಡಳಿತ ವಿಧಾನಸಭೆಗಳ ಉಪಸಭಾಪತಿಗಳು
- ಚೀಫ್ ಜಸ್ಟೀಸ್ ಆಫ್ ಇಂಡಿಯಾ
- ಸುಪ್ರೀಂ ಕೋರ್ಟಿನ ಜಡ್ಜ್ಗಳು
- ಹೈಕೋರ್ಟಿನ ಮುಖ್ಯ ನ್ಯಾಯಾಧೀಶರುಗಳು
- ಹೈಕೋರ್ಟಿನ ಜಡ್ಜ್ಗಳು
ಪ್ರ.13 ಬೇರೆ ದೇಶಗಳ ಧ್ವಜಗಳ ಜೊತೆಯಲ್ಲಿ ಭಾರತದ ರಾಷ್ಟ್ರಧ್ವಜವನ್ನು ನಾವು ಹೇಗೆ ಪ್ರದರ್ಶಿಸಬಹುದು?
- ಫ್ಲಾಗ್ ಕೋಡ್ ಆಫ್ ಇಂಡಿಯಾದ ಪ್ಯಾರಾ 3.32ರ ಪ್ರಕಾರವಾಗಿ ಒಂದು ಸೀದಾಗೆರೆಯಲ್ಲಿ ಬೇರೆ ದೇಶಗಳ ಧ್ವಜಗಳನ್ನು ಹಾರಿಸಿದ್ದಲ್ಲಿ ನಮ್ಮ ರಾಷ್ಟ್ರಧ್ವಜವು ಬಲತುದಿಯಲ್ಲಿ ಇರಬೇಕು. ಬೇರೆ ದೇಶಗಳ ಧ್ವಜಗಳನ್ನು ಆ ದೇಶಗಳ ಹೆಸರುಗಳ ಇಂಗ್ಲಿಷ್ ಆವೃತ್ತಿಯ ಪ್ರಕಾರವಾಗಿ ಅಕ್ಷರ ಮಾಲೆಯ ಸರದಿಯ ಪ್ರಕಾರವಾಗಿರಬೇಕು. ಧ್ವಜಗಳನ್ನು ವೃತ್ತಾಕಾರವಾಗಿ ಹಾರಿಸಬೇಕಿದ್ದಲ್ಲಿ ನಮ್ಮ ರಾಷ್ಟ್ರಧ್ವಜವನ್ನು ಮೊದಲಿಗೆ ಹಾರಿಸಿ ನಂತರ ಬೇರೆ ದೇಶಗಳ ಧ್ವಜಗಳನ್ನು ಬಲದಿಂದ ಎಡಕ್ಕೆ (ಗಡಿಯಾರದ ಸುತ್ತಿನ ಹಾಗೆ) ಹಾರಿಸಬೇಕು.
- ಗೋಡೆಯ ಮೇಲೆ ಅಡ್ಡಲಾದ ಕೋಲಿನ ವಿರುದ್ಧವಾಗಿ ಧ್ವಜವನ್ನು ಪ್ರದರ್ಶಿಸಬೇಕಾದಾಗ ರಾಷ್ಟ್ರಧ್ವಜವು ಬಲಭಾಗಕ್ಕಿರಬೇಕು ಮತ್ತು ಇದರ ಕೋಲು ಇನ್ನೊಂದು ಧ್ವಜದ ಕೋಲಿನ ಮುಂದೆ ಇರಬೇಕು.
- ರಾಷ್ಟ್ರಧ್ವಜವನ್ನು ಬೇರೆ ದೇಶಗಳ ಧ್ವಜಗಳ ಜೊತೆಯಲ್ಲಿ ಹಾರಿಸಬೇಕಾಗಿ ಬಂದಾಗ ಧ್ವಜಸ್ತಂಭಗಳು ಒಂದೇ ಗಾತ್ರದಲ್ಲಿ ಇರಬೇಕು.